ನಜೀಬ್, ಮೊಹಮ್ಮದ್ -
ಈಜಿಪ್ಟಿನ ಒಬ್ಬ ಸೈನ್ಯಾಧಿಕಾರಿ. ರಾಜಕಾರಣಿ. ದೊರೆ ಫರೂಕರನ್ನು ಪದಚ್ಯುತರನ್ನಾಗಿ ಮಾಡಿದ 1952ರ ಕ್ರಾಂತಿಯ ಹೋರಾಟದಲ್ಲಿ ಪ್ರಮುಖ ಪಾತ್ರ ವಹಿಸಿದರು. ಜನನ ಸೂಡಾನಿನ ಖಾರ್ಟೂಮಿನಲ್ಲಿ. 1901ರಲ್ಲಿ ಈಜಿಪ್ಟಿನ ಸೇನೆ ಸೇರಿದ ಇವರು 1948ರ ಅರಬ್-ಇಸ್ರೇಲ್ ಯುದ್ಧದಲ್ಲಿ ಶೌರ್ಯದಿಂದ ಹೋರಾಡಿ, ಜಮಾಲ್ ಅಬ್ದುಲ್ ನಾಸೆರರ ನಾಯಕತ್ವದ ರಾಷ್ಟ್ರೀಯ ಸೈನಿಕ ತಂಡದ ಗೌರವ ಅಭಿಮಾನ ಗಳಿಸಿದರು. ಸ್ವತಂತ್ರ ಅಧಿಕಾರಿಗಳು ಎಂಬ ಹೆಸರಿನ ಈ ತಂಡದ ಬೆಂಬಲದಿಂದ ನಜೀಬರು ಕಿಂಗ್ ಫರೂಕರ ಬೆಂಬಲ ಪಡೆದಿದ್ದ ಸ್ಪರ್ಧಿಯ ವಿರುದ್ಧ ನಿಂತು ಅಧಿಕಾರಿಗಳ ಸಂಘದ ಅಧ್ಯಕ್ಷರಾಗಿ ಆಯ್ಕೆ ಹೊಂದಿದರು (1952). ಸ್ವತಂತ್ರ ಅಧಿಕಾರಿಗಳು ಆ ವರ್ಷ ನಡೆಸಿದ ಕ್ಷಿಪ್ರಾಕ್ರಮಣದಲ್ಲಿ ದೊರೆ ಫರೂಕ್ ಸಿಂಹಾಸನದಿಂದ ಉರುಳಿದರು. ನಜೀಬರು ಹೊಸ ಗಣರಾಜ್ಯದ ಅಧ್ಯಕ್ಷರಾದರು (1953). ಆದಷ್ಟು ಜಾಗ್ರತೆಯಾಗಿ ಸಂವೈಧಾನಿಕ ಸರ್ಕಾರ ಏರ್ಪಡಬೇಕೆಂಬುದು ಇವರ ಇಚ್ಛೆಯಾಗಿತ್ತು. ಕ್ರಾಂತಿಕಾರಿ ಮಂಡಲಿಯವರು ಅನೇಕ ರಾಜಕಾರಣಿಗಳನ್ನು ಕ್ಷಿಪ್ರ ವಿಚಾರಣೆಗೆ ಗುರಿಪಡಿಸಿ ಶಿಕ್ಷೆ ವಿಧಿಸುತ್ತಿದ್ದದ್ದು ಇವರಿಗೆ ಒಪ್ಪಿಗೆಯಾಗಲಿಲ್ಲ. 1954ರಲ್ಲಿ ಇವರು ಅಧ್ಯಕ್ಷತೆಗೆ ರಾಜೀನಾಮೆ ನೀಡಿದರು. ಆದರೆ ನಾಗರಿಕರ ಹಾಗೂ ಸೈನಿಕರ ಗುಂಪುಗಳ ಒತ್ತಾಯಕ್ಕೆ ಮಣಿದು ಇವರು ಅಧಿಕಾರದಲ್ಲಿ ಮುಂದುವರೆದರು. ನಾಸೆರರು ಸ್ವಲ್ಪಮಟ್ಟಿಗೆ ನಜೀಬರ ಇಚ್ಛೆಯಂತೆ ನಡೆದುಕೊಂಡರು. ರಾಜಕೀಯ ಪಕ್ಷಗಳಿಗೆ ಅವಕಾಶ ದೊರಕಿತು. ಸಂವಿಧಾನ ರಚನಾ ಸಭೆಯನ್ನು ಕರೆಯಲಾಯಿತು.

1954ರಲ್ಲಿ ನಾಸೆರರ ಕೊಲೆ ಯತ್ನವೊಂದು ನಡೆಯಿತು. ಇದರಲ್ಲಿ ನಜೀಬರ ಕೈವಾಡವೂ ಇತ್ತೆಂಬ ಆಪಾದನೆ ಬಂತು. ನಜೀಬರು ಗೃಹಬಂಧನಕ್ಕೆ ಒಳಗಾದರು. ಅಲ್ಲಿಂದ ಮುಂದೆ ಈಜಿಪ್ಟಿನ ರಾಜಕಾರಣದಲ್ಲಿ ಇವರು ಪಾತ್ರವಹಿಸಲಿಲ್ಲ.  (ಬಿ.ಕೆ.ಸಿ.ಜಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ